ರಾಲ್ಫ್, ಲಿಂಟನ್ 1893-1953 ಅಮೆರಿಕದ ಸುಪ್ರಸಿದ್ಧ ಮಾನವಶಾಸ್ತ್ರಜ್ಞ. 20ನೆಯ ಶತಮಾನದ ಪ್ರಥಮಾರ್ಧದಲ್ಲಿ ಮಾನವಶಾಸ್ತ್ರದ ಅಪೂರ್ವ ಬೆಳವಣಿಗೆಗೆ ಮೂಲ ಕಾರಣರಾದ ಮಹಾಪಂಡಿತರಲ್ಲಿ ಒಬ್ಬ.

1893 ಫೆಬ್ರುವರಿ 27 ರಂದು ಫಿಲಿಡೆಲ್ಫಿಯದಲ್ಲಿ ಜನಿಸಿದ. ಚಿಕ್ಕಂದಿನಿಂದಲೇ ಈತನಿಗೆ ಸಾಂಸ್ಕøತಿಕ ವಿಷಯಗಳಲ್ಲಿ, ಸಂಶೋಧನೆಗಳಲ್ಲಿ ಆಸಕ್ತಿ ಬೆಳೆಯಿತು. ಫಿಲಿಡೆಲ್ಫಿಯದ ಸ್ವಾರ್ತ್‍ಮೊರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ (1912-13) ನ್ಯೂ ಮೆಕ್ಸಿಕೊ, ಗ್ವಾಟಿಮಾಲ ಮತ್ತು ಕಾಲೊರಾಡೋಗಳಲ್ಲಿ ಕ್ಷೇತ್ರ ಸಂಶೋಧಕ ತಂಡದ ಸದಸ್ಯನಾಗಿ ಭಾಗವಹಸಿದ್ದ. ಪದವೀಧರನಾದ ಮೇಲೆ (1915) ನ್ಯೂಜೆರ್ಸಿಯಲ್ಲಿ ಚರಿತ್ರಪೂರ್ವಕಾಲದ ಒಂದು ನಿವೇಶನವನ್ನು ಸಂಶೋಧಿಸಿ (1915 ಮತ್ತು 1919) ಈ ವಿಚಾರವಾಗಿ ತನ್ನ ಪ್ರಪ್ರಥಮ ಪ್ರಮಾಣಬದ್ಧ ಲೇಖನಮಾಲೆಯನ್ನು ಪ್ರಕಟಿಸಿದ.

ಅನಂತರ ಈತ ಪೆನ್ಸಿಲ್ವೇನಿಯ ವಿಶ್ವಿದ್ಯಾಲಯದಲ್ಲಿ ಎಂ.ಎ. ಪದವಿ ಗಳಿಸಿದ (1916). ಇದೇ ವರ್ಷ ಅಮೆರಿಕದ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಮ್‍ಗಾಗಿ ಅಮೆರಿಕದ ನೈಋತ್ಯ ಭಾಗಗಳಲ್ಲಿ ಪ್ರಾಚ್ಯವಸ್ತು ಶೋಧನಾಕಾರ್ಯ ಕೈಕೊಂಡ. ಒಂದನೆಯ ಮಹಾಯುದ್ಧ ಕಾಲದಲ್ಲಿ ತಾಯ್ನಾಡಿನ ಪರವಾಗಿ ಭಾಗವಹಿಸಿ ಫ್ರಾನ್ಸ್ ದೇಶದಲ್ಲಿ ಹೋರಾಡಿ, ಯುದ್ಧದ ನಂತರ ಸ್ವದೇಶಕ್ಕೆ ಹಿಂತಿರುಗಿದ; ಅನಂತರ ತನ್ನ ಸಂಶೋಧನೆಯ ಕಾರ್ಯವನ್ನು ಮುಂದುವರಿಸಿದ.

1920ರಲ್ಲಿ ಈತ ಮಾರ್ಕೆಸ್ ದ್ವೀಪಗಳಲ್ಲಿ ಶೋಧನ ಕಾರ್ಯಕೈಗೊಂಡು ಎರಡು ವರ್ಷಗಳ ಕಾಲ ಅಧ್ಯಯನ ನಡೆಸಿದ. ಈ ಸಮಯದಲ್ಲಿ ಇವನ ಶೋಧನ ಜೀವನದಲ್ಲಿ ಒಂದು ಗಮನಾರ್ಹ ತಿರುವು ಉಂಟಾಯಿತು. ಪೂರ್ವಜರ ಸಾಂಸ್ಕøತಿಕ ಉಳಿಕೆ-ವಸ್ತುಗಳ ಅಧ್ಯಯನಕ್ಕಿಂತ ಜೀವಂತ ಬುಡಕಟ್ಟು ಜನರ ವಸ್ತುನಿಷ್ಠ ನೇರ ಅವಲೋಕನಾಧಾರಿತ ಅಧ್ಯಯನ ಹೆಚ್ಚು ಅರ್ಥಪೂರ್ಣವೆಂದು ಮನಗಂಡ. ಅಂದಿನಿಂದ ಮಾನವಕುಲಶಾಸ್ತ್ರ ಕ್ಷೇತ್ರ ಇವನನ್ನು ಬಹುವಾಗಿ ಆಕರ್ಷಿಸಿತು. ಪಾಲಿನೇಷ್ಯದಿಂದ ಹಿಂತಿರುಗಿ ಬಂದ ಮೇಲೆ ಅಮೆರಿಕದ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಮ್‍ನಲ್ಲಿ ಅಮೆರಿಕನ್ ಇಂಡಿಯನ್ ಬುಡಕಟ್ಟು ಜನಾಂಗಗಳಿಗೆ ಸಂಬಂಧಿಸಿದಂತೆ ಸಂಗ್ರಹಿತವಾದ ಪ್ರಾಚ್ಯ ವಸ್ತುಗಳ ಮೇಲ್ವಿಚಾರಕನಾಗಿ ಸೇವೆ ಸಲ್ಲಿಸಿದ. (1922-28). ಈ ಅವಧಿಯಲ್ಲಿ ದಿ ಮೆಟೀರಿಯಲ್ ಕಲ್ಚರ್ ಆಫ್ ದಿ ಮಾರ್ಕೇಸಸ್ ಐಲೆಂಡ್ಸ್, ಗೈಡ್ ಟು ದಿ ಪಾಲಿನೇಷನ್ ಅಂಡ್ ಮೈಕ್ರೊನೇಷನ್ ಕಲೆಕ್ಷನ್ಸ್. ಫೀಲ್ಡ್ ಮ್ಯೂಸಿಯಮ್ ಎಂಬ ಕೃತಿಗಳು ಪ್ರಕಟವಾದವು. 1925 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಗಳಿಸಿದ. 1925-27ರ ವರೆಗೆ ಏಕಾಂಗಿಯಾಗಿ ಮಡಗಾಸ್ಕರ್ (ಈಗಿನ ಮ್ಯಾಲಗಾಸಿ ಗಣರಾಜ್ಯ) ಹಾಗೂ ಪೂರ್ವ ಆಫ್ರಿಕ ಪ್ರದೇಶಗಳಲ್ಲಿ ಸಂಶೋಧನೆ ಕೈಕೊಂಡು ಯಶಸ್ವಿಯಾಗಿ ಮುಗಿಸಿದ. ಈ ಸಂಶೋದನೆಯ ಫಲವಾಗಿ ದಿ ತನಾಲ, ಎ ಹಿಲ್ ಟ್ರೈಬ್ ಆಫ್ ಮಡಗಾಸ್ಕರ್ ಎಂಬ ಗ್ರಂಥ ಪ್ರಕಟವಾಯಿತು. (1928).

1928ರಲ್ಲಿ ವಿಸ್‍ಕಾನ್‍ಸಿನ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿಯನ್ನು ಕೈಗೊಂಡು ಅತ್ಯಲ್ಪ ಕಾಲದಲ್ಲಿಯೇ ಅಮೆರಿಕದ ಪ್ರಮುಖ ಸಾಮಾಜಿಕ ವಿe್ಞÁನಿಯಾಗಿ ಹೆಸರು ಗಳಿಸಿದ. ವಿಸ್‍ಕಾನ್‍ಸಿನ್ (1928-37), ಕೊಲಂಬಿಯ (1937-46), ಏಲ್ (1946-53) ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕನಾಗಿ ಕೆಲಸಮಾಡಿ ಸ್ಟರ್ಲಿಂಗ್ ಪ್ರೊಫೆಸರ್ ಎಂಬ ಬಿರುದು ಪಡೆದ.
1936ರಲ್ಲಿ ಪ್ರಕಟವಾದ ದಿ ಸ್ಟಡಿ ಆಫ್ ಕಲ್ಚರ್ ಎಂಬ ಕೃತಿ ಇವನ ಸಂಶೋಧನ ವಿಧಾನಕ್ಕೆ ಕೈಗನ್ನಡಿಯಾಗಿದೆ. ಈ ಕೃತಿಯಲ್ಲಿ ಸ್ಥೂಲವಾಗಿ ಚರ್ಚಿಸಲಾಗಿದ್ದ ಮಾನವನ ಉಗಮ, ಸಾಂಸ್ಕøತಿಕ ವರ್ತನೆ ಇತ್ಯಾದಿ ಅನೇಕ ವಿಚಾರಗಳನ್ನು ದಿ ಟ್ರೀ ಆಫ್ ಕಲ್ಚರ್ (1955) ಎಂಬ ಗ್ರಂಥದಲ್ಲಿ ವಿವರವಾಗಿ ಚರ್ಚಿಸಿದ. ಸಮಾಜದ ಪೃಥಕ್ಕಾದ ಅಂಶ ಹಾಗೂ ಸಂಘಟಿತ ಮುಖಗಳ ಬಗ್ಗೆ ವಿಚಾರಮಾಡುವುದಕ್ಕಾಗಿ ಸ್ಥಾನಮಾನ ಮತ್ತು ಪಾತ್ರ ಎಂಬ ಭಾವರೂಪಗಳನ್ನು ಬಳಸಿದ. ಚಿಕಿತ್ಸಕ ಮನೋವಿe್ಞÁನಿ ಅಬ್ರಾಂ ಕಾರ್ಡಿನರ್ ಜೊತೆಗೂಡಿ ದಿ ಇಂಡಿವಿಶುಯಲ್ ಅಂಡ್ ಹಿಸ್ ಸೊಸೈಟಿ ಮತ್ತು ದಿ ಸೈಕಲಾಜಿಕಲ್ ಫ್ರಾಂಟಿಯರ್ಸ್ ಆಫ್ ಸೊಸೈಟಿ ಎಂಬ ಎರಡು ಮಾನವಕುಲ ವರ್ಣನಾತ್ಮಕ ವಿಶ್ಲೇಷಣೆಗಳನ್ನು ಪ್ರಕಟಿಸಿದ. ವ್ಯಕ್ತಿಯ ಹೆಚ್ಚು ಕಡಿಮೆ ಪ್ರಮಾಣಬದ್ಧವಾದ ಸಾಂಸ್ಕøತಿಕ ಪಾತ್ರಗಳ ನಿರ್ವಹಣೆಯಿಂದ ಸಮಾಜದಲ್ಲಿ ಗಳಿಸಿಕೊಳ್ಳುವ ಅನುಭವಗಳಿಂದ `ಗಣ್ಯ ವ್ಯಕ್ತಿತ್ವ ಮಾದರಿ ಬೆಳೆದು ಬರುತ್ತದೆ ಎಂಬುದನ್ನು ತನ್ನ ದಿ ಕಲ್ಚರಲ್ ಬ್ಯಾಕ್‍ಗೌಂಡ್ ಆಫ್ ಪರ್ಸನಾಲಿಟಿ (1946) ಎಂಬ ಕೃತಿಯಲ್ಲಿ ವಿಶದಪಡಿಸಿದ. ಈ ಮಾದರಿಗೆ ವಿರುದ್ಧವಾಗಿ ವರ್ತಿಸಿದರೆ ತಲೆದೋರುವ ಸಮಸ್ಯೆಗಳನ್ನು ಕುರಿತು ಕಲ್ಚರ್ ಅಂಡ್ ಮೆಂಟಲ್ ಡಿಸಾರ್ಡರಸ್ ಎಂಬ ಪುಸ್ತಕದಲ್ಲಿ ಸಾಂಸ್ಕøತಿಕ ಸಾಪೇಕ್ಷತೆ, ಸಾಂಸ್ಕøತಿಕ ಪರಿವರ್ತನೆ, ಸಾಂಸ್ಕøತಿಕ ಚರಿತ್ರೆಯ ಬಗ್ಗೆ ಆಳವಾಗಿ ಚಿಂತನೆ ನಡೆಸಿದ.

ಈತ ಅನೇಕ ಸಂಘಸಂಸ್ಥೆಗಳ ಸದಸ್ಯನೂ ಅಮೆರಿಕದ ಮಾನವಶಾಸ್ತ್ರ ಸಂಘದ ಅಧ್ಯಕ್ಷನೂ ಆಗಿದ್ದ. 1953 ಡಿಸೆಂಬರ್ 24 ರಂದು ಕನೆಕ್ಟಿಕಟ್‍ನ ನ್ಯೂ ಹ್ಯಾವೆಗ್‍ನಲ್ಲಿ ನಿಧನಹೊಂದಿದ. ವಿಶ್ವ ಸಾಂಸ್ಕøತಿಕ ಇತಿಹಾಸದ ಪುನರ್‍ನಿರ್ಮಾಣ ಎಂಬ ಕೃತಿ ಇವನ ನಿಧನಾನಂತರ ಪ್ರಕಟವಾಯಿತು.	
					
(ಎಂ.ಬಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ